ಬುಧವಾರ, ಡಿಸೆಂಬರ್ 3, 2014

ಚಂದಮಾಮ ಬಾವಿಗೆ ಬಿದ್ದಾಗ

ಕತೆ ಅಂದ್ರೆ ಕತೆ ಮರ್ರೆ .....

(ಕೃಪೆ: ಅಂತರ್ಜಾಲ)


ಅಳಿಯರಾಮ ಆಗಿನ್ನೂ  ಒಂದೂವರೆ  ವರ್ಷದ ಕೂಸು . ಆರು ತಿಂಗಳಿಗೇ ತೊದಲದೇ ಮಾತಾಡುವುದನ್ನು ಕಲಿತ ಮಗುವನ್ನು ಕಂಡರೆ ಅಪ್ಪನಿಗೆ ಮುದ್ದು. ಅಮ್ಮನಿಗೆ ಮುದ್ದೋ ಮುದ್ದು. ಊರವರಿಗೆ ಚಿಂತಾಮಣಿ. ಬಂದವರಿಗೆ ಬಂಗಾರ. ಹೋದವರಿಗೆ ಮುತ್ತಿನ ಗೊಂಬೆ. ಅವನು ಆಡಿದ್ದೆಲ್ಲಾ ಆಟ ಹಿಡಿದದ್ದೆಲ್ಲ ಹಟ. ರಾತ್ರಿ ಊಟಕ್ಕೆ ಚಂದಮಾಮ ಬೇಕೇಬೇಕು. ಆಕಾಶದಲ್ಲಿ ಕಂಡರೆ ಅವನು; ಇಲ್ಲದಿದ್ದರೆ  ನನಗೇ ಕರೆ !

ಇಬ್ಬರ ನಾಮಧೇಯ ಒಂದೇ ಇರುವುದಕ್ಕೋ ಅಥವಾ ಅವನನ್ನೇ ಹೋಲುವ ನುಣ್ಣನೆಯ ತಲೆ ಹೊಂದಿರುವುದರಿಂದಲೋ, ಇಲ್ಲಾ ಈ ಎರಡೂ ಕಾರಣ ಸೇರಿಯೋ ಗೊತ್ತಿಲ್ಲ; ನನ್ನನ್ನೇ ಅವನು ಅವನನ್ನೇ ನಾನು ಅಂದುಕೊಂಡಿರಬೇಕು ಈ ರಾಮರಾಯ.

ಹೀಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವಾರು ಉಪಕತೆಗಳಿದ್ದರೂ ಮುಖ್ಯವಾದುದೊಂದನ್ನ ನಿಮಗೆ ಹೇಳಿಯೇ ಬಿಡುವ ತೀರ್ಮಾನಕ್ಕೆ ಬಂದಿದ್ದೇನೆ.
                        
ಒಮ್ಮೆ ಗಣೇಶನ ಹಬ್ಬದ ದಿನ ನನಗೆ ಕರೆ ಬಂತು. " ಮಗು ಉಂತಿಲ್ಲೆ, ಚಂದಮಾಮ ಬೇಕಂಬ್ರು ನೀನೆ ಬಾ " ..... ಹೊರಟೆ.... ಆ ದಿನ ರಾತ್ರಿ ಚಂದ್ರನನ್ನ ನೋಡಿದರೆ ಅಪವಾದ ಖಾತ್ರಿ ಅಂತ ಗೊತ್ತಿತ್ತು... ಹೊರಟೆ... ಅಳಿಯನಿಗೆ ಊಟ ಮಾಡಿಸಿದರೆ ಅಪವಾದ ದೊಡ್ಡದಲ್ಲವೆಂದು ತೀರ್ಮಾನಿಸಿ ಹೊರಟೆ....

ಎಷ್ಟು ಕಷ್ಟಪಟ್ಟರೂ ಕಣ್ಣು ತಪ್ಪಿಸಲು ಸಾಧ್ಯವಾಗಲೇ ಇಲ್ಲ.  ಚೌತಿಯ ಚಂದ್ರನ ಸೌಂದರ್ಯದ ಸೆಳೆತವನ್ನು ಮೀರದಾದೆ.
                                    ******     *****     *****     *****
ಅವತ್ತೇನೋ  ಆಕಾಶದ ಚಂದ್ರನನ್ನು ನಾನೇ ಕಂಡುಕೊಂಡು ಹೋಗಿ ಅಳಿಯನಿಗೆ ದರ್ಶನ ನೀಡಿದ್ದೂ ಆಯಿತು ಊಟ ಮಾಡಿಸಿದ್ದೂ ಆಯಿತು. ಆ ಶುಕ್ಲಪಕ್ಷ ತುಂಬಿ ಹುಣ್ಣಿಮೆ ಬಂತಲ್ಲಾ ಅವತ್ತು ಬಂತು ನೋಡಿ ಪೀಕಲಾಟ.

ಒಳ್ಳೇ ದಿನ ಅಂತ ಅಕ್ಕನ ಮನೆಯಲ್ಲಿ ಸತ್ಯನಾರಾಯಣ ವೃತವನ್ನೂ ಮಂಡಲದ ಪೂಜೆಯನ್ನೂ ಇಟ್ಟುಕೊಂಡಿದ್ದರು. ಇವನಿಗೆ ಆಕಾಶದ ಚಂದಿರನೇ ಚಂದಿರನಾದರೆ ಬಂದ ತಾರಿಕೆಯರಿಗೆಲ್ಲಾ ಇವನೇ ಚಂದಿರ. ಇಂತಹಾ ಸಂಭ್ರಮದಲ್ಲಿ ಈ ಮಾಮ ನೆನಪಾದಾನೆಯೇ ಕಳ್ಳರಾಮನಿಗೆ?

ಅವರಲ್ಲೊಬ್ಬಳು ಇವಳು.... ನನಗೆ ಹೇಗೆಲ್ಲಾ ಲೆಕ್ಕಾಚಾರ ಹಾಕಿದರೂ ದೂರದಿಂದಾದರೂ ಅತ್ತೆಯ ಮಗಳಾಗಬೇಕಾದವಳೇ! ಸ್ವಲ್ಪ ಚೌತಿಯ ಚಂದ್ರನ ಹಾಗೆ ಕಣ್ಸೆಳೆಯುತ್ತಿದ್ದಳು. ಪುಣ್ಯಾತಗಿತ್ತಿಗೆ ಏನನ್ನಿಸಿತೋ... ಚಂದಮಾಮನ್ನ ತೋರಿಸಹೋದಳು ಬಾಲರಾಮನಿಗೆ.

ಅದೇ ರಾಮಾಯಣ! ಅವನಿಗೆ ಚಂದ್ರ ಬೇಕಂತೆ!!! ಮಂಥರೆಯಷ್ಟು ಬುದ್ದಿ ಇಲ್ಲದೇ ಕನ್ನಡಿಯ ಬದಲಾಗಿ ಬಾವಿ ತೋರಿಸಿದಳು. ಬೇಕಿತ್ತಾ ಇದೆಲ್ಲ?!

"ಅಯ್ಯೋ .... ಚಂದಮಾಮ ಬಾವಿಗೆ ಬಿದ್ದ....." ಅಂತ ಹೊಸ ರಾಮಾಯಣ ಶುರುವಾಯಿತು ನೋಡಿ.

ಬೆಣ್ಣೆ ಬೇಡ... ಬೆಕ್ಕೂ ಬೇಡಾ... ಸಕ್ಕರೆ ಬೇಡ..ಬೆಲ್ಲ ಬೇಡ... ಕಬ್ಬಿನ ಜಿಲ್ಲೆಯೂ ಬೇಡ...ಆಟಿಕೆಯೂ ಬೇಡ... ಚಂದಮಾಮನ್ನ ಕಾಪಾಡಿ ಸಾಕು!

ಮುಹೂರ್ತ ನೋಡಿ ಕಾರುಮೋಡದ ಅಂತರ್ಪಟ ಬೇರೆ ಚಂದಮಾಮನಿಗೆ... ಆಕಾಶದಲ್ಲಿ!

ಬಂದವರೆಲ್ಲಾ ಬಫೂನಾದರು... ಸರ್ಕಸ್ಸು ಮಾಡಿದರು... ಹುಲಿ ಕುಣಿತ... ಆನೆಯಾಟ... ಕರಡಿ ಕುಣಿತ, ದೊಂಬರಾಟ ... ಊಹುಂ ಯಾವುದೂ ಚಂದಮಾಮನಿಗೆ ಸಮನಲ್ಲ.

             ********      *********      *******    **********

ಪೂಜೆ ಮುಗಿಸಿ ಬಂದ ತಾಯಿಗೆ ಗೊತ್ತಿಲ್ಲದ ಮಗುವಿನ ಗುಟ್ಟೆ?

"ಇಲ್ಲವೇ ನಮ್ಮ ಚಂದಿರ! ಕರೆತನ್ನಿ" ಎಂಬ ಆಜ್ಞೆ!

ನಾಲ್ಕು ಜನ ಕಟ್ಟಾಳುಗಳು ನನ್ನತ್ತ ದೌಡಾಯಿಸಿದರು... ನಾನು ಜಗ್ಗಲಿಲ್ಲ!
ಪರಿಪರಿ ಬೇಡಿಕೊಂಡರೂ ನಾನು ಕುಗ್ಗಲಿಲ್ಲ!!!!

ಅದಾಗಲೇ ಗುಟ್ಟಾಗಿ ಚೌತಿಯ ಚಂದುಳ್ಳಿಯನ್ನು ಹುಣ್ಣಿಮೆಯ ಬೆಳಕಲ್ಲಿ ಯಾರಿಗೂ ಗೊತ್ತಿಲ್ಲದಂತೆ ನೋಡುತ್ತಾ... ಅವಳಿಗೆ  ತಿಳಿಯಿತೋ ಏನೋ... ಬೇರ್ಯಾರಿಗೂ ತಿಳಿಯದಿದ್ದರೂ ಸಿಕ್ಕಿಬಿದ್ದ ಭಾವ.... ಅವಳ ಕೈಯ್ಯಲ್ಲೇ ಇದೆ ಮಗುವಿನ್ನೂ... ನನ್ನ ತೂಕವೆಲ್ಲಾ ಕಾಲಿಗೇ ಇಳಿದಿದೆ!! ನಿಧಾನವಾಗಿ ಶುರುವಾದ ಅವಲಕ್ಕಿ ಕುಟ್ಟುವ ಸ್ವರ ಹೊಟ್ಟೆಯಿಂದ ಗಂಟಲತ್ತ ದಾಂಗುಡಿ ಇಡುತ್ತಿದೆ...ಚಂದಮಾಮ ನಿಜಕ್ಕೂ ಬಾವಿಗೇ ಬಿದ್ದಿದ್ದಾನೆ!!!!!

 ಊಹುಂ ನಾನು ಜಗ್ಗಲೇ ಇಲ್ಲ!

ಜಗ್ಗಿ ಎಳೆದುಕೊಂಡು ಹೋದರು ಮಾರಿ ಹಬ್ಬದ ಕುರಿಯಂತೆ!

ನನ್ನ ನೋಡಿದ್ದೇ ರಾಮರಾಯ ಹಲ್ಲುಕಿಸಿದ... ಕೈ ಚಾಚಿದೆ.... ಅಷ್ಟೆ ! ಮತ್ತೇನೂ ಗೊತ್ತಿಲ್ಲ

ಮಂಡಲದ ಪೂಜೆಗೆ ಬಂದವರೆಲ್ಲಾ ನಮ್ಮ ಸುತ್ತ ಮಂಡಲಾಕಾರದಲ್ಲಿ ನಿಂತು ನೋಡುತ್ತಿದ್ದರು! ಚೌತಿಯ ಚಂದಿರನನ್ನ ನೋಡಿದ್ದಕ್ಕೆ ಅಪವಾದ ತಪ್ಪಲಿಲ್ಲ; ಮದುವೆಯೂ ತಪ್ಪಲಿಲ್ಲ.. ಹೋಳಿಗೆಯೂ ತಪ್ಪಲಿಲ್ಲ.!

ಇವತ್ತಿಗೆ ಮೂರನೆಯ ವರ್ಷ!  ಅಳಿಯರಾಮ ಮಾಡಿದ ಕೆಲಸಕ್ಕೆ ಪುಟ್ಟ  ಸೀತಮ್ಮ ಚಂದಮಾಮನ ಮೇಲೆ ನೀರು ಸುರಿಸಿಬಿಟ್ಟಿದ್ದಾಳೆ! ನೋಡಿ ಚಂದಿರನನ್ನ ಹೇಗೆ ಒದ್ದೆ ಮಾಡಿಹಾಕಿದ್ದಾಳೆ!

*****     ****    *****




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ