ಬುಧವಾರ, ಡಿಸೆಂಬರ್ 3, 2014

ಚಂದಮಾಮ ಬಾವಿಗೆ ಬಿದ್ದಾಗ

ಕತೆ ಅಂದ್ರೆ ಕತೆ ಮರ್ರೆ .....

(ಕೃಪೆ: ಅಂತರ್ಜಾಲ)


ಅಳಿಯರಾಮ ಆಗಿನ್ನೂ  ಒಂದೂವರೆ  ವರ್ಷದ ಕೂಸು . ಆರು ತಿಂಗಳಿಗೇ ತೊದಲದೇ ಮಾತಾಡುವುದನ್ನು ಕಲಿತ ಮಗುವನ್ನು ಕಂಡರೆ ಅಪ್ಪನಿಗೆ ಮುದ್ದು. ಅಮ್ಮನಿಗೆ ಮುದ್ದೋ ಮುದ್ದು. ಊರವರಿಗೆ ಚಿಂತಾಮಣಿ. ಬಂದವರಿಗೆ ಬಂಗಾರ. ಹೋದವರಿಗೆ ಮುತ್ತಿನ ಗೊಂಬೆ. ಅವನು ಆಡಿದ್ದೆಲ್ಲಾ ಆಟ ಹಿಡಿದದ್ದೆಲ್ಲ ಹಟ. ರಾತ್ರಿ ಊಟಕ್ಕೆ ಚಂದಮಾಮ ಬೇಕೇಬೇಕು. ಆಕಾಶದಲ್ಲಿ ಕಂಡರೆ ಅವನು; ಇಲ್ಲದಿದ್ದರೆ  ನನಗೇ ಕರೆ !

ಇಬ್ಬರ ನಾಮಧೇಯ ಒಂದೇ ಇರುವುದಕ್ಕೋ ಅಥವಾ ಅವನನ್ನೇ ಹೋಲುವ ನುಣ್ಣನೆಯ ತಲೆ ಹೊಂದಿರುವುದರಿಂದಲೋ, ಇಲ್ಲಾ ಈ ಎರಡೂ ಕಾರಣ ಸೇರಿಯೋ ಗೊತ್ತಿಲ್ಲ; ನನ್ನನ್ನೇ ಅವನು ಅವನನ್ನೇ ನಾನು ಅಂದುಕೊಂಡಿರಬೇಕು ಈ ರಾಮರಾಯ.

ಹೀಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವಾರು ಉಪಕತೆಗಳಿದ್ದರೂ ಮುಖ್ಯವಾದುದೊಂದನ್ನ ನಿಮಗೆ ಹೇಳಿಯೇ ಬಿಡುವ ತೀರ್ಮಾನಕ್ಕೆ ಬಂದಿದ್ದೇನೆ.
                        
ಒಮ್ಮೆ ಗಣೇಶನ ಹಬ್ಬದ ದಿನ ನನಗೆ ಕರೆ ಬಂತು. " ಮಗು ಉಂತಿಲ್ಲೆ, ಚಂದಮಾಮ ಬೇಕಂಬ್ರು ನೀನೆ ಬಾ " ..... ಹೊರಟೆ.... ಆ ದಿನ ರಾತ್ರಿ ಚಂದ್ರನನ್ನ ನೋಡಿದರೆ ಅಪವಾದ ಖಾತ್ರಿ ಅಂತ ಗೊತ್ತಿತ್ತು... ಹೊರಟೆ... ಅಳಿಯನಿಗೆ ಊಟ ಮಾಡಿಸಿದರೆ ಅಪವಾದ ದೊಡ್ಡದಲ್ಲವೆಂದು ತೀರ್ಮಾನಿಸಿ ಹೊರಟೆ....

ಎಷ್ಟು ಕಷ್ಟಪಟ್ಟರೂ ಕಣ್ಣು ತಪ್ಪಿಸಲು ಸಾಧ್ಯವಾಗಲೇ ಇಲ್ಲ.  ಚೌತಿಯ ಚಂದ್ರನ ಸೌಂದರ್ಯದ ಸೆಳೆತವನ್ನು ಮೀರದಾದೆ.
                                    ******     *****     *****     *****
ಅವತ್ತೇನೋ  ಆಕಾಶದ ಚಂದ್ರನನ್ನು ನಾನೇ ಕಂಡುಕೊಂಡು ಹೋಗಿ ಅಳಿಯನಿಗೆ ದರ್ಶನ ನೀಡಿದ್ದೂ ಆಯಿತು ಊಟ ಮಾಡಿಸಿದ್ದೂ ಆಯಿತು. ಆ ಶುಕ್ಲಪಕ್ಷ ತುಂಬಿ ಹುಣ್ಣಿಮೆ ಬಂತಲ್ಲಾ ಅವತ್ತು ಬಂತು ನೋಡಿ ಪೀಕಲಾಟ.

ಒಳ್ಳೇ ದಿನ ಅಂತ ಅಕ್ಕನ ಮನೆಯಲ್ಲಿ ಸತ್ಯನಾರಾಯಣ ವೃತವನ್ನೂ ಮಂಡಲದ ಪೂಜೆಯನ್ನೂ ಇಟ್ಟುಕೊಂಡಿದ್ದರು. ಇವನಿಗೆ ಆಕಾಶದ ಚಂದಿರನೇ ಚಂದಿರನಾದರೆ ಬಂದ ತಾರಿಕೆಯರಿಗೆಲ್ಲಾ ಇವನೇ ಚಂದಿರ. ಇಂತಹಾ ಸಂಭ್ರಮದಲ್ಲಿ ಈ ಮಾಮ ನೆನಪಾದಾನೆಯೇ ಕಳ್ಳರಾಮನಿಗೆ?

ಅವರಲ್ಲೊಬ್ಬಳು ಇವಳು.... ನನಗೆ ಹೇಗೆಲ್ಲಾ ಲೆಕ್ಕಾಚಾರ ಹಾಕಿದರೂ ದೂರದಿಂದಾದರೂ ಅತ್ತೆಯ ಮಗಳಾಗಬೇಕಾದವಳೇ! ಸ್ವಲ್ಪ ಚೌತಿಯ ಚಂದ್ರನ ಹಾಗೆ ಕಣ್ಸೆಳೆಯುತ್ತಿದ್ದಳು. ಪುಣ್ಯಾತಗಿತ್ತಿಗೆ ಏನನ್ನಿಸಿತೋ... ಚಂದಮಾಮನ್ನ ತೋರಿಸಹೋದಳು ಬಾಲರಾಮನಿಗೆ.

ಅದೇ ರಾಮಾಯಣ! ಅವನಿಗೆ ಚಂದ್ರ ಬೇಕಂತೆ!!! ಮಂಥರೆಯಷ್ಟು ಬುದ್ದಿ ಇಲ್ಲದೇ ಕನ್ನಡಿಯ ಬದಲಾಗಿ ಬಾವಿ ತೋರಿಸಿದಳು. ಬೇಕಿತ್ತಾ ಇದೆಲ್ಲ?!

"ಅಯ್ಯೋ .... ಚಂದಮಾಮ ಬಾವಿಗೆ ಬಿದ್ದ....." ಅಂತ ಹೊಸ ರಾಮಾಯಣ ಶುರುವಾಯಿತು ನೋಡಿ.

ಬೆಣ್ಣೆ ಬೇಡ... ಬೆಕ್ಕೂ ಬೇಡಾ... ಸಕ್ಕರೆ ಬೇಡ..ಬೆಲ್ಲ ಬೇಡ... ಕಬ್ಬಿನ ಜಿಲ್ಲೆಯೂ ಬೇಡ...ಆಟಿಕೆಯೂ ಬೇಡ... ಚಂದಮಾಮನ್ನ ಕಾಪಾಡಿ ಸಾಕು!

ಮುಹೂರ್ತ ನೋಡಿ ಕಾರುಮೋಡದ ಅಂತರ್ಪಟ ಬೇರೆ ಚಂದಮಾಮನಿಗೆ... ಆಕಾಶದಲ್ಲಿ!

ಬಂದವರೆಲ್ಲಾ ಬಫೂನಾದರು... ಸರ್ಕಸ್ಸು ಮಾಡಿದರು... ಹುಲಿ ಕುಣಿತ... ಆನೆಯಾಟ... ಕರಡಿ ಕುಣಿತ, ದೊಂಬರಾಟ ... ಊಹುಂ ಯಾವುದೂ ಚಂದಮಾಮನಿಗೆ ಸಮನಲ್ಲ.

             ********      *********      *******    **********

ಪೂಜೆ ಮುಗಿಸಿ ಬಂದ ತಾಯಿಗೆ ಗೊತ್ತಿಲ್ಲದ ಮಗುವಿನ ಗುಟ್ಟೆ?

"ಇಲ್ಲವೇ ನಮ್ಮ ಚಂದಿರ! ಕರೆತನ್ನಿ" ಎಂಬ ಆಜ್ಞೆ!

ನಾಲ್ಕು ಜನ ಕಟ್ಟಾಳುಗಳು ನನ್ನತ್ತ ದೌಡಾಯಿಸಿದರು... ನಾನು ಜಗ್ಗಲಿಲ್ಲ!
ಪರಿಪರಿ ಬೇಡಿಕೊಂಡರೂ ನಾನು ಕುಗ್ಗಲಿಲ್ಲ!!!!

ಅದಾಗಲೇ ಗುಟ್ಟಾಗಿ ಚೌತಿಯ ಚಂದುಳ್ಳಿಯನ್ನು ಹುಣ್ಣಿಮೆಯ ಬೆಳಕಲ್ಲಿ ಯಾರಿಗೂ ಗೊತ್ತಿಲ್ಲದಂತೆ ನೋಡುತ್ತಾ... ಅವಳಿಗೆ  ತಿಳಿಯಿತೋ ಏನೋ... ಬೇರ್ಯಾರಿಗೂ ತಿಳಿಯದಿದ್ದರೂ ಸಿಕ್ಕಿಬಿದ್ದ ಭಾವ.... ಅವಳ ಕೈಯ್ಯಲ್ಲೇ ಇದೆ ಮಗುವಿನ್ನೂ... ನನ್ನ ತೂಕವೆಲ್ಲಾ ಕಾಲಿಗೇ ಇಳಿದಿದೆ!! ನಿಧಾನವಾಗಿ ಶುರುವಾದ ಅವಲಕ್ಕಿ ಕುಟ್ಟುವ ಸ್ವರ ಹೊಟ್ಟೆಯಿಂದ ಗಂಟಲತ್ತ ದಾಂಗುಡಿ ಇಡುತ್ತಿದೆ...ಚಂದಮಾಮ ನಿಜಕ್ಕೂ ಬಾವಿಗೇ ಬಿದ್ದಿದ್ದಾನೆ!!!!!

 ಊಹುಂ ನಾನು ಜಗ್ಗಲೇ ಇಲ್ಲ!

ಜಗ್ಗಿ ಎಳೆದುಕೊಂಡು ಹೋದರು ಮಾರಿ ಹಬ್ಬದ ಕುರಿಯಂತೆ!

ನನ್ನ ನೋಡಿದ್ದೇ ರಾಮರಾಯ ಹಲ್ಲುಕಿಸಿದ... ಕೈ ಚಾಚಿದೆ.... ಅಷ್ಟೆ ! ಮತ್ತೇನೂ ಗೊತ್ತಿಲ್ಲ

ಮಂಡಲದ ಪೂಜೆಗೆ ಬಂದವರೆಲ್ಲಾ ನಮ್ಮ ಸುತ್ತ ಮಂಡಲಾಕಾರದಲ್ಲಿ ನಿಂತು ನೋಡುತ್ತಿದ್ದರು! ಚೌತಿಯ ಚಂದಿರನನ್ನ ನೋಡಿದ್ದಕ್ಕೆ ಅಪವಾದ ತಪ್ಪಲಿಲ್ಲ; ಮದುವೆಯೂ ತಪ್ಪಲಿಲ್ಲ.. ಹೋಳಿಗೆಯೂ ತಪ್ಪಲಿಲ್ಲ.!

ಇವತ್ತಿಗೆ ಮೂರನೆಯ ವರ್ಷ!  ಅಳಿಯರಾಮ ಮಾಡಿದ ಕೆಲಸಕ್ಕೆ ಪುಟ್ಟ  ಸೀತಮ್ಮ ಚಂದಮಾಮನ ಮೇಲೆ ನೀರು ಸುರಿಸಿಬಿಟ್ಟಿದ್ದಾಳೆ! ನೋಡಿ ಚಂದಿರನನ್ನ ಹೇಗೆ ಒದ್ದೆ ಮಾಡಿಹಾಕಿದ್ದಾಳೆ!

*****     ****    *****
ಶುಕ್ರವಾರ, ಜನವರಿ 1, 2010

ಹಕ್ಲು ಸೌಂತೆಕಾಯಿ ಹುಳಿ


ಅಕಾಸ್ಮಾತ್ತಾಗಿ ಬಸ್ ಸ್ಟಾಂಡಿನ ಪಕ್ಕದ ಅಂಗಡಿಯೊಂದರ ಮುಂದೆ ಪಾರ್ಲೆ-ಜಿ ಬಿಸ್ಕತ್ತಿನ ಮುದ್ದು ಮುಖದ ಮಗುವನ್ನು ನೋಡಿದೆ. ತಕ್ಷಣ ತಂತಾನೇ ಸೈಕಲ್ಲು ಬಲಕ್ಕೆ ಹೊರಳಿತು!

ಹಾಗೇ ಎರಡು ಫರ್ಲಾಂಗ್ ಮುಂದೆ ಹೋಗಿ, ಸಣ್ಣ ಹೊಳೆಯ ಸಂಕವನ್ನು ದಾಟಿ ಸರಕಾರಿ ಬಾವಿಯ ಹತ್ತಿರ ಸೈಕಲ್ಲು ನಿಲ್ಲಿಸಿ ಉಬ್ಬು ಹತ್ತಿ ಶಾಂತಕ್ಕನ ಮನೆಗೆ ಬಂದೆ. ಅಕ್ಕಿ ಗೇರುತ್ತಿದ್ದವಳು ತಲೆ ಎತ್ತಿ ನೋಡಿದವಳೇ ’ಅಂತೂ ಅಕ್ಕನ್ಮನೆ ದಾರಿ ನೆನ್ಪಿತ್ತಂತಾಯ್ತ್’ ಅಂತಂದಳು. ’ಎಂತ ಮಾಡುದ್ಮರಾಯ್ತಿ, ಪುರ್ಸೊತ್ತಿಲ್ಯಲೆ..’ ಅಂತ ಸಮಾಧಾನ ಹೇಳಿದ್ದಾಯ್ತು!

ನೀರು-ಜೋನೆ ಬೆಲ್ಲ ತಂದಿಟ್ಟು ’ಕುಡ್ಯುಕೆಂತ ಬೇಕಾ?’ ಅಂತ ಕೇಳಿದಳು. ಮಾಣಿ ಎಲ್ಲೂ ಕಾಣುತ್ತಿರಲಿಲ್ಲ; ’ಅವ್ನಿಗೆಂತ ಇನ್ನೂ ಶಾಲೆ ಬಿಡಲ್ಯ?’ ಅಂತ ಕೇಳಿದೆ!

’ಬತ್ಬತ್ತಾ ನಿನ್ಕಣೆಗೇ ಚೊರೆ ಅಂಡೆ ಆಯ್ದ ಮರಾಯ!ದಿನಾ ಒಂದಲ್ಲ ಒಂದ್ ತಕಣ್ಬಂದ್ ತಲೆ ತಿಂತ ಕಾಣ್! ಈಗ ಹಿತ್ಲ್ ಬದಿಲೆಲ್ಲೋ ಸೊಕ್ಕತ್ತಾ ಕಾಂತ್! ಅಯ್ಯಬ್ಬಾಮ್ಮೆಗಿತ್ಮರಾಯ!’ ಅಂತಂದಳು ಒಂದೇ ಉಸಿರಿಗೆ!

ಮಾವ ಬಂದಿದ್ದನ್ನ ಸೈಕಲ್ಲು ಶಬ್ದದಲ್ಲೇ ಹಿಡಿದು, ಶಾಲೆಯಲ್ಲಿ ಕಲಿತ, ಕಲಿಯದ ಹಾಡು-ಕುಣಿತ ಎಲ್ಲಾ ಒಟ್ಟುಮಾಡಿ ಕುಣಿಯುತ್ತ ಬರುತ್ತಿದ್ದ ಅಳಿಯ ಇಂದ್ಯಾಕೆ ಹೀಗೆ ಅಂತ ಆಶ್ಚರ್ಯವಾಯಿತು! ಆ ಕುತೂಹಲದಿಂದಲೇ ಸದ್ದು ಮಾಡದೆ ಹಿತ್ತಿಲ ಕಡೆ ಹೋದೆ!

ಹುಡುಕಿ, ಹುಡುಕಿ, ಕೊನೆಗೆ ಮೂಲೆಯೊಂದರಲ್ಲಿ ಒಂದು ಕೋಲಿಂದ ನೆಲವನ್ನು ಬಗೆಯುತ್ತ, ಸೊಳ್ಳೆ ಹೊಡೆದುಕೊಳ್ಳುತ್ತ, ಒಂದು ಕೈ ಮುಷ್ಟಿಯಲ್ಲಿ ಅದೇನೋ ಹಿಡಿದಿಕೊಂಡು, ಪಕ್ಕದಲ್ಲೆಲ್ಲೋ ನೀರಿನ ಅಂಡೆ ಇಟ್ಟುಕೊಂಡು ಅದೇನರಲ್ಲೆಲ್ಲೋ ವಿಶೇಷವಾಗಿ ತಲ್ಲೀನನಾದ ಮಣ್ಮಯಿ ಅಳಿಯರಾಮನನ್ನು ಗುರುತಿಸಿದೆ!

ಮಿಣ್ಣಗೆ ಹೋಗಿ ತಣ್ಣಗೆ ಅವನ ಕಣ್ಮುಚ್ಚಿದೆ! ಒಮ್ಮೆ ಕೊಸರಿದ! ಮತ್ತೆ ನಿಧಾನವಾಗಿ ಕೈಯನ್ನೆಲ್ಲಾ ತನ್ನ ಮಣ್ಣ ಕೈಯಿಂದ ಸವರಿ ’ಚಂದಮಾಮ!’ ಎಂದ! ಯಾಕೋ ಇದ್ದಕ್ಕಿದ್ದಂತೆ ಅಳಲಿಕ್ಕೇ ಶುರುಮಾಡಿದ!

ಇವನದೆಂಥಾ ಲೆಕ್ಕಾಚಾರವೆಂದು ತಿಳಿಯದೇ ಕೈ ಬಿಟ್ಟಿದ್ದೇ ತಡ! ಅದೆಂಥ ವೀರಭದ್ರ ಕೋಪವೋ ಅವನದು? ನನ್ನನ್ನು ವಂಡಾರು ಕಂಬಳದ ಹೋರಿಯಂತೆ ಅಲಂಕರಿಸಿ, ಕೋಟಿ ತೀರ್ಥದ ಕೆರೆ ಉಕ್ಕುವಂತೆ ಉಕ್ಕುಕ್ಕಿ ಅಳತೊಡಗಿದ!

ನಾನೋಳ್ಳೆ ಫಜೀzತಿಗೆ ಸಿಕ್ಕಿಕೊಂಡೆ! ಮುಟ್ಟಲು ಹತ್ತಿರ ಹೋದರೆ ದೂರ್ವಾಸ ಮುನಿ, ಸುಮ್ಮನಿದ್ದರೆ ಗಂಗಾಭವಾನಿಗೆ ಕೊನೆಯೇ ಇಲ್ಲ! ’ಓ ದೇವರೆ ಇದೆಂಥಾ ಪರಿಸ್ಥಿತಿಗೆ ನನ್ನ ತಂದೊಡ್ಡಿದೆಯಪ್ಪಾ’ ಎಂದುಕೊಂಡು ಶಾಂತಿ ಕಾದು ಕುಳಿತೆ!

ಕೊನೆಗೂ ಆ ಕಾಲ ಬಂತು , ಅಷ್ಟರಲ್ಲಿ ಕತ್ತಲಾಗಿತ್ತು!

’ಯಾಕೆ ಮರ್ರಾಯ, ಮಾವನ ಮೇಲೇ ಸಿಟ್ಟಾ?’ ಎಂದು ಕೇಳಿದ್ದಕ್ಕೆ- ’ಹಕ್ಲು..ಸೌಂತೆಕಾಯಿ..ಬೀಜ...ಎಲ್ಲಿ ಹೋಯ್ತು..ಊಂಂಂ..’ ಮತ್ತೆ ಶುರು ಮಾಡಿದ..

ಕೂಡಲೆ ಅರ್ಥ ಆಗಲಿಲ್ಲ!
ಆಲೋಚಿಸಿದ ಮೇಲೆ ಗೊತ್ತಾಗಿದ್ದು, ಮುಷ್ಟಿ ಕೈಯಲ್ಲಿದ್ದುದ್ದು ಹಕ್ಲು ಸೌಂತೆ ಕಾಯಿ ಬೀಜ ಕೊಸರಾಡುವಾಗ ಮತ್ತು ಕೆಸರಾಡುವಾಗ ಬಿದ್ದು ಹೋಯ್ತು ಅಂತ!

’ಅಯ್ಯೋ ಮರಾಯ! ಸೌಂತೆ ಬೀಜಕ್ಕಷ್ಟು ಮರ್ಕುದನ? ನಮ್ಮನೆಗ್ಬಾರ, ನಿಂಗೊಂದ್ಗೋಣಿಚೀಲ ತುಂಬ ಸೌಂತೆ ಬೀಜ ಕಟ್ಟಿ ಕಳ್ಸ್ತೆ!’

’ಊಂಂಂ... ನಂಗದೇ ... ಸೌಂತೆ ....ಬೀಜ..ಬೇಕ್SSsss..’

ಒಟ್ಟು ಅಳಿಯನಿಗೆ ನಂಬಿಕೆ ಇಲ್ಲ! ಅದನ್ನು ಬರಿಸಲಿಕ್ಕೋಸ್ಕರ ಸ್ವಲ್ಪ ಹುಡುಕಾಟದ ನಾಟಕ ಆಡಿದ್ದಾಯ್ತು! ಸಾಧಾರಣ ಸಿಟ್ಟಿಳಿದ ಮೇಲೆ ಕೆರೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಶಾಂತಕ್ಕನಿಗೆ ಗೊತ್ತಾಗದಂತೆ ನಾನೂ ಸ್ನಾನ ಮಾಡಿ, ಪಂಚೆ ತಿರುಗಿಸಿ ಉಟ್ಟು, ಮನೆಯೊಳಗೆ ಕಾಲಿಡುವಾಗ ರಾತ್ರಿ ಗಂಟೆ ಎಂಟು!

’ಅದೊಂದು ಮಂಗ, ನೀನೊಂದು ಬುಕ್ಕ! ಜೋಡಿ ಸಮಾ ಆಯ್ತು!’ ಅಂತೊಂದು ಪ್ರತಿಕ್ರಿಯೆಯೂ ಬಂತು!

ಕೊನೆಗೆ ಬಿಸ್ಕತ್ತು, ಬಾಳೆ ಹಣ್ಣು, ಚಂದಮಾಮನ ಕತೆ, ಅಂತೆಲ್ಲಾ ಉಪಚಾರ ಮಾಡಿ ಅಳಿಯನನ್ನು ಮಲಗಿಸಲು ಕಳಿಸುವಾಗ ಹನ್ನೊಂದು ಹೊಡೆದಿತ್ತು!

*********

ಕೋಳಿ ಕೂಗಿದ್ದು, ಬಾವಯ್ಯ ಅಂಗಡಿಗೆ ಹೋಗಿದ್ದು, ಮಧ್ಯದಲ್ಲೆಲ್ಲೋ ಬೆಡ್ ಕಾಫಿ ಕುಡಿದು ಮಲಗಿದ್ದು, ಯಾವುದೂ ಆಗಿಲ್ಲವೆಂಬಂತೆ ಬೆಚ್ಚಗೆ ಕಂಬಳಿ ಗೂಡಿನೊಳಗೆ ಅದ್ವೈತಾನಂದ ಸವಿಯುತ್ತಿದ್ದೆ!

ರಾಮ ಬಂದು ಕಂಬಳಿ ಎತ್ತಿ ’ಮಾಮಾ’ ಅಂತ ಕೂಗಿದ್ದೇ ತಡ...ಏಳಂತಸ್ತಿನ ಕಟ್ಟಡದ ತುತ್ತ ತುದಿಯಿಂದ ಧಡಕ್ಕನೆ ಬಂದು ಈ ಜಡ ದೇಹದೊಳಗೆ ಬಿದ್ದಂತಾಗಿ ಅಲ್ಲೇ ಒಮ್ಮೆ ಎದ್ದು ಹಾರಿದೆ.

ಕಣ್ಣು ಉಜ್ಜಿಕೊಂಡಿರಲಿಲ್ಲ -’ಮಾಮಾ ಸೌಂತೆ ಕಾಯಿ ಬೀಜ...’ ಅಂತ ಸುರುವಾದ ಮಂದ್ರ ಆರೋಹಣಕ್ಕೇ ಏರಿತು!
ತೊಳೆಯದ ಮೊಗದಲ್ಲೇ ಹುಡುಕಿದ್ದಕ್ಕೆ ಕೊನೆಗೆ ಐದರಲ್ಲಿ ಮೂರು ಬೀಜಗಳು ಸಿಕ್ಕಿದವು!

ಒರಟ ಅಳಿಯನಿಗೆ ಬುದ್ಧಿ ಹೇಳಿ ತಿರುಗಾಡುವ ಜಾಗದಿಂದ ಪಾತಿಯನ್ನು ಸ್ಥಳಾಂತರಿಸಿ ತಿಂಗಿನ ನಲುವಿನಲ್ಲಿ ನೆಟ್ಟು, ಅದಕ್ಕೊಂದಷ್ಟು ಇವನಿಗೊಂದಷ್ಟು ಉಪಚಾರ ಮಾಡಿ ಮನೆಗೆ ಬರುವಾಗ ಮದ್ಯಾಹ್ನ ಹನ್ನೊಂದೂವರೆ!

’ನೀಯೆಂಥ ಹೇಳ್ದೆ ಕೇಣ್ದೆ ಓಡಿ ಹೋದ್ಯಾ ಕಂಡೆ ಮರಾಯ! ಅದ್ಕಂತೂ ಕಾನಿಸ್ಮಾರಿ ರಜೆ, ನಿಂಗೊಂದು ಕಸ್ಬಿಲ್ದಿದ್ದು! ಬೇಗ ಮಿಂದ್ಕಂಬಾ ಊಟ ಮಾಡ್ಲಕ್ಕ್!’ ಅಂತ ಹೇಳಿದಳು.

ಊಟ ಮಾಡಿ ಸ್ವಲ್ಪ ಮಲಗೋಣವೆಂದರೆ...

’ಮಾಮ, ಅಷ್ಟು ದೊಡ್ಡ ಸೌಂತೆ ಬೀಳು ಅಷ್ಟು ಸಣ್ಣ ಬೀಜದೊಳಗೆ ಹ್ಯಾಂಗ್ ಮಂಕಣತ್ತ್?’
’ಅದ್ಕೆಷ್ಟ್ ದೊಡ್ಡ್ ಚಪ್ರ ಬೇಕ್?’
’ಅದ್ರಲ್ಲೆಷ್ಟ್ ದೊಡ್ ಕಾಯಾತ್ತ್?’
’ಆ ಕಾಯಲ್ಲೆಷ್ಟ್ ಬೀಜ ಇರತ್ತ್?’
’ಆ ಬೀಜ ಎಲ್ಲ ನಟ್ರೆ ಎಷ್ಟ್ ದೊಡ್ಡ್ ಚಪ್ರ ಹಾಕ್ಕ್?’

...ಹೀಗೆ ಕೊನೆಯೇ ಇಲ್ಲದ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲೇ ಆಯಿತು. ಕೊನೆಗೂ ಎರಡು ಇಪ್ಪತ್ತು ಅಂಕದ ಪ್ರಶ್ನೆಗಳನ್ನು ಬಿಟ್ಟೇ ಸೈಕಲ್ಲೇರಿದೆ!


******

ಚಂದ್ರ ಬೊಕ್ಕೆ ಮರದಲ್ಲಿ ಈ ಸಲ ಬಿಳಿಯುವಷ್ಟು ಹಲಸಿನ ಹಣ್ಣಾಗಿತ್ತು. ಶಾಂತಕ್ಕನ ಮನೆ ಸಮೀಪ ಎಲ್ಲೂ ಹಲಸಿನ ಮರವೇ ಇಲ್ಲವೆಂಬುದು ನೆನಪಾಗಿ ನಾಲ್ಕು ಹಣ್ಣುಗಳನ್ನು ಕೊಯ್ದು ಗೋಣಿಚೀಲದೊಳಗೆ ಸೇರಿಸಿ, ಸೈಕಲ್ಲೇರಿಕೊಂಡು ಹೊರಟೆ!

’ಅಂತೂ ಚಂದ್ರನ್ ಹೆಸ್ರಲ್ಲಿ ಹಲ್ಸಿನಣ್ಣ್ ತಿಂಬು ಯೋಗ ಇತ್ತಂತೇಳಾಯ್ತ್’ ಎಂದುಲಿದು ಹಣ್ಣು ಬಿಡಿಸಿ ಕುಳಿತಳು ಶಾಂತಕ್ಕ.
’ಚಂದ್ಮಾಮ, ಮೊದಲೆಲೆ ನೀನ್ಹೇಳಿದಾಂಗೇ ಬಂದಿತ್ಕಾಣುs...ಬಂದಿತ್ಕಾಣುs...' ಎಂದು ಅಳಿಯ ರಾಮ ಕೈ ಹಿಡಿದೆಳೆದ.

ಅದು ಸೌತೆ ಬೀಳು ಅಂತ ನೆನಪಾಗಲಿಕ್ಕೆ ಐದು ನಿಮಿಷ ಬೇಕಾಯಿತು! ಹಿತ್ತಿಲಿಗೆ ಹೋಗುವಾಗ ಬಾವಯ್ಯ ನೀರು ಹಾಕುತ್ತಿದ್ದರು.

ಹಾಕಿದ ಮೂರು ಬೀಜಗಳಲ್ಲಿ ಒಂದು ಏನೂ ಆಗಿರಲಿಲ್ಲ, -’ಪೊಕ್ಕಾ ಕಾಂತದು’ ಅಂದೆ.
’ಪೊಕ್ಕಂದ್ರೆಂತ ಮಾಮ?’
ಉತ್ತರ ಹೇಳುವುದರಲ್ಲಿ ಸಾಕೋ ಬೇಕಾಯಿತು.

ಮತ್ತೊಂದು ಬೀಜ ಒಂದಿಂಚು ಬೆಳೆದು ’ಹಲೋ ಎನ್ನುತ್ತಿದ್ದರೆ ಇನ್ನೊಂದು ಬಹುದಿನದ ಮೌನವನ್ನು ಮುರಿದು ಮಾತನಾಡಲು ಸೂರ್ಯನನ್ನು ಹುಡುಕುವಂತೆ ಎಳೆನಾಗರದ ಹೆಡೆಯಂಥಾ ಸುಳಿಯ ತುದಿಯನ್ನು ಅರೆ ಬಿರಿದು ಜೀವನೋತ್ಸಾಹದ ದ್ಯೋತಕದಂತೆ....ಅರರೆ!

ಸೌಂತೆ ಮೊಳಕೆ ನೋಡುತ್ತಿರುವುದು ಮೊದಲ ಸಲವೇನೂ ಅಲ್ಲ! ಇಂದೇನಿದು ಹೊಸನೋಟ? ... ಊಹುಂ. ಕಾರಣ ಸ್ಪಷ್ಟವಾಗಿ ಸಿಗುತ್ತಿಲ್ಲ!

ಹಲಸಿನ ನೆನಪಾಯಿತೋ ಏನೊ! ರಾಮ ಅಡಿಗೆ ಮನೆಯತ್ತ ಹೊರಟ! ನಾನೂ ಬೆನ್ನು ಹಿಡಿದೆ!

’ಇದ್ನಿಂಗಲ್ಲ, ಕಡ್ಬು ಮಾಡುಕ್ಬೇಕ್, ಇಗ ತಕೊ, ಮತ್ಕೇಣ್ಬೇಡ..’ ಅಂತ ಹೇಳಿ ಅಕ್ಕ ರಾಮನಿಗೊಂದು ತೊಳೆ ಕೊಟ್ಟಳು!
ತಿನ್ನುತ್ತಾ ಕುಣಿಯುತ್ತಾ ಹಿತ್ತಿಲ ಕಡೆಗೋಡಿದ! ನಾನೂ ಓಡುವವನಿದ್ದೆ, ಅಷ್ಟರಲ್ಲಿ ’ಅಳಿಯ ಇದ್ರೆ ಅಕ್ಕನೇ ಬೇಡಲ್ಲ ನಿಂಗೆ?’ ಕೊಯ್ಸಾಣಿ ತೆಗೆದಳು ಶಾಂತಕ್ಕ!

’ಸುಮ್ನಾಯ್ಕರ, ಹಾಂಗೆಂತ ಇಲ್ಲೆ ಮರಾಯ್ತಿ’

ಅಷ್ಟರಲ್ಲಿ ಅಳಿಯನ ಚೀರಾಟ ಕೇಳಿಸಿತು. ದಡಬಡಿಸಿ ನಾವಿಬ್ಬರೂ ಹೋಗಿ ನೋಡಿದರೆ... ಅಬ್ಬಬ್ಬಾ ರುದ್ರಾವತಾರ!
’ಆ ಕೆಂಡ ಕಣ್ಣುಗಳೋ, ಅದರಿಂದ ಮತ್ತೇಲ್ಲೋ ಕೆಳಗಿನ ಮೂಗಿನಿಂದ ಇಳಿವ ಸುರಗಂಗೆಯೋ, ತರಥರೆನೆ ಕುಣಿವ ಅವನ ಆವೇಶವೋ ....!

’ಅಪ್ಪಯ್ಯ ಎಲ್ಲಿ?’
’ನಂಗೆ ನಿನ್ನಪ್ಪ್ಪಯ್ಯನ್ನ ಕಾಯುದೇ ಕೆಲ್ಸ ಅಲ್ಲ’ ಅಂತೇಳಿ ಮತ್ತೆ ಅಕ್ಕ ಹಲಸು ಸುಲಿಯಲು ಹೋದಳು!

ಸರಿಯಾಗಿ ಬಾವ ಬಂದರು-’ಯಾಕೆ ನನ್ನ ಸೌಂತೆ ಮರಿಯನ್ನ ಕೊಂದ್ರಿ?’ ಅಂತ ಕಾರಿಯೇ ಬಿಟ್ಟ!
ವಿಷಯ ಗೊತ್ತಾಯಿತು - ಬಾವನವರು ಕೊಡಪಾನದಲ್ಲಿ ನೀರು ಹಾಕುವ ಭರದಲ್ಲಿ ’ಹಲೋ’ ಹೇಳಿದ್ದ ಸೌತೆಮರಿ ತುಂಡಾಗಿ ಬಿದ್ದು ಮಣ್ಣುಪಾಲಾಗಿತ್ತು!

ಸಂತೈಸಿದಷ್ಟೂ ಸಿಟ್ಟೇರುತ್ತಲೇ ಇತ್ತು!

ಯಾವಾಗ ಆ ಸಿಟ್ಟು ನನ್ನ ಕಡೆ ತಿರುಗುತ್ತದೋ ಏನೋ ಅಂತ ಹೆದರಿ ಅಕ್ಕನಿಗೆ ಹೇಳಿ ಒತ್ತಾಯಕ್ಕೂ ನಿಲ್ಲದೆ ಸೈಕಲ್ ಹತ್ತಿದೆ.

*********
ಮತ್ತೆ ಮೂರು ತಿಂಗಳ ನಂತರ ಮುಂಜಾನೆ ಅಲ್ಲಿಗೆ ಹೋಗಿದ್ದೆ.
ರಾಮನಿಗೆ ಸಿಕ್ಕಾಪಟ್ಟೆ ಸಂಭ್ರಮ! ನಾನು ಬಂದದ್ದೊಂದಕ್ಕೇ ಮಾತ್ರ ಅಲ್ಲ ಅಂತ ಗೊತ್ತಾದಾಗ ಬೇರೆ ಕಾರಣದ ಬಗ್ಗೆ ಕುತೂಹಲವಾಗಿ ಅಕ್ಕನನ್ನು ಕೇಳಲಾಗಿ, ’ನೀ ಬಂದೊಂದೆಂತ ಬೀಜ ಕುತ್ತಿ ಹೋದ್ಯೋ ಏನೋ ಮಾರಾಯ, ಅವನಿಗದೊಂದ್ಬಿಟ್ರೆ ಮತ್ಯಂತದೂ ಬ್ಯಾಡ ಕಾಣ್! ಎಷ್ಟೊತ್ತಿಕ್ಕಂಡ್ರೂ ಸೌಂತೆ ಬೀಳ್ಹತ್ತೇ ಇರ್ತ. ಮಳೆ ಬಂದ್ರೂ, ಗಾಳಿಬಂದ್ರೂ ನಾವ್ಕರಿದೇ ಬತ್ತಿಲ್ಲೆ.. ಮಂಗನ ಕಾಟದಲ್ಲಿ ಆ ಗಿಡ ಉಳ್ಕಣ್ಸ್ಕಾರೆ ಇವ್ರಿಗೆ ಸಾಕಾಯಿ ಹೋಯ್ತ್ ಕಾಣ್! ಮಂಗನ ಕಣ್ತಪ್ಪಿ ಒಂದೇ ಒಂದ್ಕಾಯ್ ಉಳ್ಕಣಿತ’ ಎಂಬ ಮಾತುಗಳು ಉದುರಿದವು!

ಯಾಕೋ ಏನೋ ತಡೆಯಲಾಗಲಿಲ್ಲ! ಮಾಣಿನ ಕರಕೊಂಡು ಹಿತ್ತಿಲಿಗೋಡಿದೆ!
ಶಿಲಾಬಾಲಿಕೆಯಂತೆ ಬಳುಕಾಡಿ ಬೆಳೆದ ತೆಂಗಿನ ಮರವನ್ನು ತನ್ನ ನೀಳ ಬಾಹುಗಳಿಂದ ಬಿಗಿದಪ್ಪಿದ ಬಳ್ಳಿಯು ಜೀವನದ ಸಂದೇಶವನ್ನೇ ಹೇಳುವಂತೆ, ಇಡೀ ಹಿತ್ತಿಲಿಗೇ ರಾಜನಂತೆ ಕಾಣುವ ದೊಡ್ಡ ಸೌಂತೆಕಾಯೊಂದನ್ನು ಚಾಚಿ ಬೆಳೆದಿತ್ತು!....

..ಅರರೆ! ಈ ಮೊದಲು ಇದಕ್ಕಿಂತ ದೊಡ್ಡದನ್ನೂ ನೋಡಿದ್ದೆನಲ್ಲಾ, ಹೀಗ್ಯಾಕೆ ಅನ್ನಿಸಿರಲಿಲ್ಲ ಅಂತ ತಲೆಕೆರೆದುಕೊಂಡೆ...ಉತ್ತರ ಸಿಕ್ಕಲಿಲ್ಲ!

ಮಾಣಿ ಒಂದೇ ಸಮ ಸೌಂತೆ ಕಾಯನ್ನೇ ನೋಡುತ್ತಿತ್ತು! ಮಾಣಿಯ ಕಣ್ಣನ್ನು ನಾನೂ ಒಂದೇಸಮ ನೋಡಿದೆ! ಅಂಥಾ ನೂರಾರು ಕಾಯೊಳಗಿರುವಷ್ಟು ಸೌಂತೆ ಬೀಜಗಳು ಕಂಡವು! ಕಣ್ಣುಜ್ಜುಜ್ಜಿ ನೋಡಿದಷ್ಟೂ ಅವು ಜಾಸ್ತಿಯಾಗುತ್ತಿದ್ದವು

”ಇವತ್ತು ನಮ್ಮ ಹಕ್ಲು ಸೌಂತೆಕಾಯಿ ಹುಳಿ ತಿಂದ್ಕಂಡೇ ಹೋತೆ ಅಲ್ದ ಮಾಮ ನೀನು’ ಅಂತ ಮಾಣಿ ಹೇಳುವಾಗ ವಾಸ್ತವಕ್ಕೆ ಬಂದು ಬಿದ್ದೆ!
***********